ಶಾಂತಿ ಕೃಷಿಪ್ರಯೋಗ...


ರಾಸಾಯನಿಕ ಕೃಷಿ ಕಲಿಸಿದ ಪಾಠ ಪ್ರಯೋಗಶೀಲ ರೈತ ಶಾಂತಿಮೂಲೆ ಅವರಿನ್ನೂ ಮರೆತಿಲ್ಲ. ಇದರ ಪರಿಣಾಮ ಅವರು ಸಾವಯವಕ್ಕೆ ಮರಳಿದರು. ಅಡಿಕೆ ತೋಟದ ಮಧ್ಯೆ ಉಪಬೆಳೆಗಳನ್ನು ಬೆಳೆದರು. ಮೆಣಸಿಗೆ ಬರುವ ಸೊರಗು ರೋಗ, ಅಡಿಕೆಯ ಕೊಳೆರೋಗಕ್ಕೆ ಸುವರ್ಣಗಡ್ಡೆ ಕಷಾಯ ಮಾಡಿ ರೋಗ ನಿರ್ಮೂಲನ ಮಾಡುತ್ತಿದ್ದಾರೆ.
"ದುಡ್ಡು ಮಾಡೊಣ ಅಂತಲೇ ರಾಸಾಯನಿಕ ಕೃಷಿಗೆ ಇಳಿದೆ. ಕೆಲವೇ ವರ್ಷಗಳಲ್ಲಿ ದುಡ್ಡು ಬರುವುದಿರಲಿ, ನನ್ನ ತೋಟ ಉಳಿಸಿಕೊಂಡರೆ ಸಾಕು ಎನ್ನುವಷ್ಟು ತೊಂದರೆ ಕಾಣಿಸಿತು. ಅದಕ್ಕೆ ಸಾವಯವಕ್ಕೆ ಬಂಗೀ ಜಂಪ್ ಮಾಡಿದ್ದು'- ಹೀಗೆ ಸುಳ್ಯದ ಕೃಷಿಕ ಶಾಂತಿಮೂಲೆ ವಿವರಿಸುತ್ತಾ ಹೋದರು. ಇವರ ಮಾತುಗಳು ಇತರೆ ರೈತರಿಗೆ ರಾಸಾಯನಿಕ ಕೃಷಿಯ ಬಗ್ಗೆ ಎಚ್ಚರಿಕೆ.

ಇವರು ಪ್ರಯೋಗಶೀಲ ಕೃಷಿಕ. ಸಸ್ಯರೋಗಗಳಿಗೆ ತಮ್ಮದೇ ರೀತಿಯ ಪರಿಹಾರ ಕಂಡುಕೊಂಡಿದ್ದಾರೆ. ಮೂಲತಃ ಶಾಂತಿಮೂಲೆ ಕೂಡಾ ಸಾಂಪ್ರದಾಯಿಕ ಕೃಷಿಕರೇ. 1964ರಲ್ಲಿ ಕೃಷಿ ಜವಾಬ್ದಾರಿ ತೆಗೆದುಕೊಂಡಾಗ ರಾಸಾಯನಿಕ ಪದ್ಧತಿ ಪ್ರಭಾವ ಹೆಚ್ಚಿತ್ತು. ಕೃಷಿಯಲ್ಲಿ ಬೇಗ ಹಣ ಮಾಡಬೇಕಾದರೆ ರಸಗೊಬ್ಬರ ಬಳಸಬೇಕು. ಕೀಟನಾಶಕ ಸಿಂಪಡಿಸಬೇಕು ಎಂಬ ಭಾವನೆ ಬಲಿಯಲು ಆರಂಭಿಸಿತ್ತು. ಇದಕ್ಕೆ ತಕ್ಕ ಹಾಗೆ ಸರ್ಕಾರದ ಪ್ರಭಾವವೂ ಇತ್ತು.

ಬದಲಾವಣೆಯಾದಂತೆ ಶಾಂತಿಮೂಲೆ ರಾಸಾಯನಿಕ ಕೃಷಿ ಕಡೆ ತಿರುಗಿದರು. ತಂದೆ ಹಿತವಚನ ನೆನಪಿಗೆ ಬರಲು ಬಹಳ ವರ್ಷಗಳೇನೂ ಬೇಕಾಗಲಿಲ್ಲ. ರಾಸಾಯನಿಕದ ಪರಿಣಾಮ-ಅಡಿಕೆ ಮರಗಳು ದುರ್ಬಲವಾಗತೊಡಗಿದವು. ಪ್ರತೀ ವರ್ಷ ಗಾಳಿ - ಮಳೆಗೆ ಮುರಿದು ಕನಿಷ್ಠ 50- 60 ಅಡಿಕೆ ಮರಗಳು ಉರುಳಿದವು. ಮುಂದೆ ತೋಟ ಬೋಡು, ಬೋಡಾಗುವ ಆತಂಕ. ಮತ್ತೆ ಸಾಂಪ್ರದಾಯಿಕ ಕೃಷಿಗೆ ನೆಗೆದರು.

1984ರ ವೇಳೆಗೆ ಅವರಿಗೆ ಜಪಾನಿನ ಮಸನೋಬ ಫುಕುವೊಕ ಅವರ "ಒಂದು ಹುಲ್ಲಿನ ಕ್ರಾಂತಿ' ಪುಸ್ತಕ ಸಿಕ್ಕಿತು. ಕನ್ನಡಕ್ಕೆ ಅನುವಾದಿಸಿದ್ದ ಮೇಲುಕೋಟೆಯ ಸಂತೋಷ್ ಕೌಲಗಿ ಅವರ ಪರಿಚಯವೂ ಆಯಿತು. ಇವರು ಮಣ್ಣಿನ ಸಂರಕ್ಷಣೆ ಕುರಿತ ಮಹತ್ವದ ಅಂಶಗಳನ್ನು ಮನದಟ್ಟು ಮಾಡಿಕೊಟ್ಟರು. ಜೊತೆಗೆ ಮಣ್ಣನ್ನು ಸಂರಕ್ಷಿಸುವ ಸಸ್ಯಗಳ ಬೀಜಗಳನ್ನು ನೀಡಿದರು. ಇದರಲ್ಲಿ "ಮುಳ್ಳಿಲ್ಲದ ನಾಚಿಕೆ ಗಿಡ' ಮುಖ್ಯವಾದುದು ಎಂದು ಶಾಂತಿಮೂಲೆ ನೆನಪಿಸಿಕೊಳ್ಳುತ್ತಾರೆ.

ಕಾಂಪೋಸ್ಟ್ ಮತ್ತು ಎರೆಗೊಬ್ಬರ

ತಿಪ್ಪೆಗೊಬ್ಬರಕ್ಕಿಂತ ಕೃಷಿ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿ ಕಾಂಪೋಸ್ಟ್ ಮಾಡಿದರೆ ಹೆಚ್ಚು ಅನುಕೂಲ. ಇದರಲ್ಲಿ ಪೋಷಕಾಂಶಗಳ ಅಂಶ ಹೆಚ್ಚಿರುತ್ತದೆ ಎಂಬುದು ತಿಳಿಯಿತು. ತಿಪ್ಪೆಗೊಬ್ಬರಕ್ಕೆ ತಿಲಾಂಜಲಿ ಹೇಳಿ, ನಾಡೆಫ್ ಪದ್ಧತಿಯಲ್ಲಿ ಕಾಂಪೋಸ್ಟ್ ಗೊಬ್ಬರಕ್ಕೆ ಮುಂದಾದರು. ಗಿಡಗಳ ಬೆಳವಣಿಗೆ ಚಿಗುರಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ರಾಧಾ ಕಾಳೆ ಎರೆಗೊಬ್ಬರ ಮಹತ್ವ ತಿಳಿಸಿದರು. ಇರುವೆ ಇಲಿ ಹೆಗ್ಗಣಗಳ ಕಾಟವಿದ್ದರೂ ತಯಾರಿಸಬಹುದು ಎಂಬುದನ್ನು ತಿಳಿಸಿದರು. ಕಾಳು ಮೆಣಸಿಗೆ ಸೊರಗು ರೋಗ ಕಾಡತೊಡಗಿತು. "ಡಯಾಕ್ವಿನ್ ಜೆಡ್ 78' ಬಳಸಿ ಕೈಸುಟ್ಟುಕೊಂಡರು. ಎರೆಹುಳುಗಳು ಸಾಯತೊಡಗಿದವು. ಅಲ್ಲಿಂದೀಚೆಗೆ ರಾಸಾಯನಿಕ ಕೀಟನಾಶಕಗಳೆಂದರೆ ದುಸ್ವಪ್ನವಾಯಿತು.

ಕಾಳು ಮೆಣಸಿನ ಸೊರಗು ರೋಗ ನಿಯಂತ್ರಣಕ್ಕೆ ಆಯುರ್ವೇದದಲ್ಲಿ ಹೇಳಿದ್ದ ಸೂತ್ರವೊಂದನ್ನು ಅಭಿವೃದ್ಧಿಪಡಿಸಿದರು. ಬೆಳ್ಳುಳ್ಳಿ ಸಾಸಿವೆ ಮಿಶ್ರಣದ ದ್ರಾವಣ. ಬೆಳ್ಳುಳ್ಳಿ ಕೆಲವು ಬಗ್ಗೆಯ ನ್ಯೂಮಟೋಡ್ಗಳ ನಿಯಂತ್ರಕ, ಸಾಸಿವೆ, ಕ್ರಿಮಿನಾಶಕ. ಇವೆರಡನ್ನು ಸೇರಿಸಿ ತಯಾರಿಸಿದ ದ್ರಾವಣದಿಂದ ಉತ್ತಮ ಫಲಿತಾಂಶವೇ ದೊರೆಯಿತು.

ಚರ್ಚೆಯಿಂದ ಪರಿಹಾರ

ತೀರ್ಥಹಳ್ಳಿಯ ಕುರುವಳ್ಳಿ ಪುರುಷೋತ್ತಮರಾಯರ ಜೊತೆ ಚರ್ಚಿಸಿ ಮಹಾಳಿ ಪ್ರಯೋಗ ನಿಯಂತ್ರಿಸುವ ಗುಣ ಕಾಡು ಸುವರ್ಣಗಡ್ಡೆಗಿದೆ ಎನ್ನುವ ವಿಚಾರ ತಿಳಿಯಿತು. ಸುವರ್ಣಗಡ್ಡೆ ಕಷಾಯ ಪ್ರಯೋಗಕ್ಕೆ ತೊಡಗಿದರು. ಅಡಿಕೆಯನ್ನು ಕಾಡುವ ಕೊಳೆ ರೋಗವನ್ನು ಇದರಿಂದ ನಿಯಂತ್ರಿಸಬಹುದು ಎಂಬುದು ಮನದಟ್ಟಾಯಿತು.

ಶಾಂತಿಮೂಲೆ ಅವರಿಗಿರುವುದು ಎರಡೂಕಾಲು ಎಕರೆ ಅಡಿಕೆ ತೋಟ. ಇದಲ್ಲದೆ ಎರಡು ಎಕರೆ ಗುಡ್ಡದ ಜಾಗದಲ್ಲಿ ಗೇರು ಗಿಡಗಳು ಇವೆ. ಅಡಿಕೆ ತೋಟದಲ್ಲಿ ತೆಂಗು, ಬಾಳೆ, ಏಲಕ್ಕಿ, ಕೊಕ್ಕೋ, ಕೊಕ್ಕಂ, ಜಾಯಿಕಾಯಿಯಂಥ ಬಹುಬೆಳೆ. ಇದಲ್ಲದೆ ಸಾಕಷ್ಟು ಔಷಧಿàಯ ಸಸ್ಯಗಳೂ ಇವೆ. ಈ ರೀತಿ ಅಂತರ ಬೆಳೆಗಳು ಇರುವುದರಿಂದ ಶಾಂತಿಮೂಲೆ ಅವರಿಗೆ ಆದಾಯಕ್ಕೆ ಕುತ್ತು ಬರಲಿಲ್ಲ. ಬೆಳೆಗೆ ಬೆಲೆ ಕಡಿಮೆಯಾದ ದಿನಗಳಲ್ಲಿಯೂ ಆಗುವ ನಷ್ಟವನ್ನು ಇವು ಸರಿದೂಗಿಸಿ ಕೊಡುತ್ತವೆ. ಅಡಿಕೆ ತೋಟದ ನಿರ್ವಹಣೆ ಜೊತೆಗೆ ಮನೆ ನಿರ್ವಹಣೆಗೆ ಇದರಿಂದಾಗಿ ಎರಡು ಕ್ವಿಂಟಾಲಿನಷ್ಟು ಗೇರು ದೊರೆಯುತ್ತದೆ.
ಗೇರು ಗಿಡಗಳಿಂದ ಉರುವಲು ಜೊತೆಗೆ ಎರೆ ಗೊಬ್ಬರಕ್ಕೆ ಬೇಕಾದ ತ್ಯಾಜ್ಯ ದೊರೆಯುತ್ತದೆ. ತೋಟದಲ್ಲಿ ಎಷ್ಟು ಬೆಳೆ ಸಾಧ್ಯವೋ ಅಷ್ಟನ್ನೂ ಬೆಳೆಸಬೇಕು.

ಆದರೆ ನೆರಳು ಬಿಸಿಲಿನ ಪ್ರಮಾಣ ನೋಡಿಕೊಳ್ಳಬೇಕು. ಬಿಸಿಲು ಚೆನ್ನಾಗಿ ಬೀಳುವ ಕಡೆ ಹೆಚ್ಚು ಎತ್ತರ ಬೆಳೆಯದ ಸಸ್ಯಗಳನ್ನು ಬೆಳೆಸಿದರು. ಅಡಿಕೆ ತೆಂಗು ಬಾಳೆಗೆ ನೆತ್ತಿ ಮೇಲೆ ಹೆಚ್ಚು ಬಿಸಿಲು ಬೀಳುವಂತೆ ನೋಡಿ ಕೊಂಡರು. ನೆರಳಿದ್ದ ಕಡೆ ಸಸ್ಯದಿಂದ ಸಸ್ಯಕ್ಕೆ ಹೆಚ್ಚು ಅಂತರ ಇಟ್ಟರು.

ಗೊಬ್ಬರ ನೀಡುವ ವಿಧಾನ

ಸಸ್ಯಗಳಿಗೆ ಗೊಬ್ಬರ ನೀಡುವ ರೀತಿಯಲ್ಲಿ ತಪ್ಪಾದರೆ ಅವುಗಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ಬಹಳ ಬೇಗ ಅರಿತರು. ಬುಡಗಳಿಗೆ ಗೊಬ್ಬರ ನೀಡುವ ಪದ್ಧತಿಯಿಂದ ಗಿಡದ ಬೇರುಗಳಿಗೆ ಸಮರ್ಪಕವಾಗಿ ಪೋಷಕಾಂಶ ಲಭ್ಯವಾಗುವುದಿಲ್ಲ. ಪೋಷಕಾಂಶಕ್ಕಾಗಿ ಗಿಡಗಳಲ್ಲಿಯೇ ಪೈಪೋಟಿ ಉಂಟಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಬುಡದಿಂದ ಅಂತರ ನೀಡಿ (ಗರಿಯ ತುದಿಯ ಭಾಗದ ಕೆಳಗೆ ವೃತ್ತಾಕಾರದಲ್ಲಿ) ಗೊಬ್ಬರ ನೀಡತೊಡಗಿದರು.

ಹೀಗೆ ಶಾಂತಿಮೂಲೆ ಎರಡೂಕಾಲು ಎಕರೆ ತೋಟವನ್ನು ಸಾವಯವಮಯವಾಗಿ ಮಾಡಿ ಈಗ ನಿರುಮ್ಮಳವಾಗಿ ಬೆಳೆ ತೆಗೆಯುತ್ತಿದ್ದಾರೆ.

ತೆಂಗಿಗೆ ಕಷಾಯ

ಮಳೆಗಾಲ ಬಂದರೆ ಶಾಂತಿಮೂಲೆ ತೋಟದ ಅಡಿಕೆ ಮರ ಶಾಂತವಾಗಿರುತ್ತದೆ. ಏಕೆಂದರೆ ಕೊಳೆರೋಗ ತಟ್ಟುವುದಿಲ್ಲ. ಇತರೆ ರೈತರಂತೆ ಬೋಡೊì ಔಷಧ ಸಿಂಪಡಿಸುವುದಿಲ್ಲ. ಬದಲಿಗೆ ಬಳಿ ಕಾಡು ಸುವರ್ಣಗಡ್ಡೆಯ ಕಷಾಯ ಸಿಂಪಡಿಸುತ್ತಾರೆ. ಇವರ ತೋಟದಲ್ಲೆಡೆ ಕಾಡು ಸುವರ್ಣಗಡ್ಡೆಯಿದೆ. ಗಡ್ಡೆ ಮತ್ತು ಮೇಲ್ಭಾಗದ ಸಸ್ಯವನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ಕುದಿಯುವ ನೀರಿಗೆ ಹಾಕುತ್ತಾರೆ. ಇಪ್ಪತ್ನಾಲ್ಕು ಗಂಟೆ ನಂತರ ಸೋಸಿ ಶೇಖರಿಸುತ್ತಾರೆ. ಆಗಸ್ಟ್ ತಿಂಗಳಿನಲ್ಲಿ ಸಿಂಪಡಿಸುವುದು ರೂಢಿ. ಎಕರೆಗೆ ಇನ್ನೂರು ಲೀಟರ್ ಕಷಾಯ ಸಾಕು. ಇದರಿಂದಲೇ ಇವರ ಅಡಿಕೆ. ಸೋಗೆ, ಸಿಂಗಾರ ಗೊನೆ ಭಾಗಗಳು ಚೆನ್ನಾಗಿ ತೊಯ್ಯುತ್ತಿದೆ.

1 comment:

  1. Anonymous11:51:00 AM

    Thanks ... good information. It will be of helpful, if you share contact number.

    ReplyDelete

ವಿಡಿಯೋ